ಆಡುಗೋಡಿ ಕ್ಷೀರೋದ್ಯಮ ಸಂಶೋಧನೆ

ಬೆಂಗಳೂರು ನಗರದ ಆಗ್ನೇಯ ಬಡಾವಣೆಯ ಆಡುಗೋಡಿಯಲ್ಲಿ ಭಾರತೀಯ ಕೃಷಿ ಸಂಶೋಧನ ಮಂಡಳಿ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐ.ಸಿ.ಎ.ಆರ್.)- ಕ್ಷೀರೋದ್ಯಮದ ಪ್ರಗತಿಗಾಗಿ ಏರ್ಪಡಿಸಿರುವ ಅಧ್ಯಯನ ಮತ್ತು ಸಂಶೋಧನ ಕೇಂದ್ರ. ಈ ಮಂಡಳಿ ಭಾರತದಲ್ಲಿ ಈ ರೀತಿಯಲ್ಲಿ ಏರ್ಪಡಿಸಿರುವ ಮೂರು ಪ್ರಾದೇಶಿಕ ಕೇಂದ್ರಗಳಲ್ಲೊಂದು (ಇನ್ನೆರಡು ಕೇಂದ್ರಗಳು ಪಶ್ಚಿಮ ಬಂಗಾಳದ ಕಲ್ಯಾಣಿಯಲ್ಲೂ ಮುಂಬಯಿ ನಗರದ ಆರೆ ಹಾಲಿನ ಕೇಂದ್ರದಲ್ಲೂ ಇವೆ). ಭಾರತದ ದಕ್ಷಿಣ ಪ್ರಾದೇಶಿಕ ಕೇಂದ್ರವಾದ ಆಡುಗೋಡಿಯಲ್ಲಿ ಕ್ಷೀರೋದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಸಂಶೋಧನೆ ನಡೆಸಲು ಅವಕಾಶ ಕಲ್ಪಿಸಿದೆ. ಜೊತೆಗೆ ಕ್ಷೀರೋದ್ಯಮದಲ್ಲಿ ಬಿ.ಎಸ್‍ಸಿ., ಎಂ.ಎಸ್‍ಸಿ., ಮುಂತಾದ ಪದವಿ ತರಗತಿಗಳಿಗೆ ಪಿಎಚ್.ಡಿ.ಗೆ ಪ್ರಾದೇಶಿಕ ಆಧಾರದ ಮೇಲೆ ನಿಯತ ಸಂಖ್ಯೆಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಶಿಕ್ಷಣ ನೀಡಲಾಗುವುದು. ಈ ಕೇಂದ್ರದಲ್ಲಿಯೇ ಪರೀಕ್ಷೆಗಳು ನಡೆಯುವುವು. ಪರಿಗಣಿತ ವಿಶ್ವವಿದ್ಯಾಲಯದ ಅಂತಸ್ತನ್ನು ಹೊಂದಿರುವ ಐ.ಸಿ.ಎ.ಆರ್. ತನ್ನದೇ ಆದ ಪದವಿಗಳನ್ನು ನೀಡುವುದು.
	
ಕ್ಷೀರೋದ್ಯಮ ಪ್ರಗತಿಗಾಗಿ ಹರಿಯಾಣದ ಕರ್ನಾಲ್‍ನಲ್ಲಿ ಸ್ಥಾಪನೆಯಾಗಿರುವ ಕ್ಷೀರೋದ್ಯಮ ಸಂಶೋಧನೆ ಸಂಸ್ಥೆಯ ಅಂಗ ಸಂಸ್ಥೆಯಾಗಿ ಇರುವ ಬೆಂಗಳೂರಿನ ಈ ಪ್ರಾದೇಶಿಕ ಕೇಂದ್ರ ವಿದ್ಯಾರ್ಥಿಗಳನ್ನು ಅಧಿಕ ಸಂಖ್ಯೆಯಲ್ಲಿ ಆಕರ್ಷಿಸುತ್ತಿದೆ. ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಒಂದು ವಿದ್ಯಾರ್ಥಿನಿಲಯವನ್ನು ಸ್ಥಾಪಿಸಿದೆ. ಕ್ಷೀರೋದ್ಯಮದ ವಿವಿಧ ಮುಖಗಳಿಗೆ ಸಂಬಂಧಿಸಿದಂತೆ ಫಲದಾಯಕವಾದ ಸಂಶೋಧನೆಗಳನ್ನು ತಜ್ಞರಿಂದ ಇಲ್ಲಿ ನಡೆಸಲಾಗುತ್ತಿದೆ.				 

(ಎಸ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ